ಎಲ್ಪಿಜಿ ಗ್ರಾಹಕರಿಗೆ ನೆಮ್ಮದಿ: ಮನೆಬಾಗಿಲಿಗೆ ಸಿಲಿಂಡರ್ ಪೂರೈಕೆಗೆ ಹೆಚ್ಚುವರಿ ಶುಲ್ಕವಿಲ್ಲ
ಗೃಹೋಪಯೋಗಿ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಮುಂದೆ ಮನೆ ಬಾಗಿಲಿಗೆ ಸಿಲಿಂಡರ್ ತಲುಪಿಸಿದರೂ ಗ್ರಾಹಕರು ಹೆಚ್ಚುವರಿ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಬಿಲ್‌ನಲ್ಲಿ ನಮೂದಿಸಲಾದ ಮೊತ್ತವನ್ನೇ ಪಾವತಿಸಬೇಕು ಎಂದು ನಾಗರಿಕ ಸರಬರಾಜು ಇಲಾಖೆ ಸ್ಪಷ್ಟಪಡಿಸಿದೆ.
ಹಿಂದಿನಿಂದಲೂ ಗ್ಯಾಸ್ ಏಜೆನ್ಸಿಗಳ ಡೆಲಿವರಿ ಸಿಬ್ಬಂದಿ ಪ್ರತೀ ಸಿಲಿಂಡರ್‌ಗೆ ಹೆಚ್ಚುವರಿ 50 ರೂ. ಅಥವಾ ಅದರಿಗಿಂತ ಹೆಚ್ಚು ಮೊತ್ತವನ್ನು ಗ್ರಾಹಕರಿಂದ ವಸೂಲಿ ಮಾಡುತ್ತಿದ್ದಾರೆ ಎಂಬ ದೂರಗಳು ಕೇಳಿಬಂದಿದ್ದವು. ದುಬಾರಿ ಸಿಲಿಂಡರ್ ದರದ ಜೊತೆಗೆ ಹೆಚ್ಚುವರಿ ಶುಲ್ಕದಿಂದ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಈಗ ಸರ್ಕಾರ ಸ್ಪಷ್ಟ ಮಾರ್ಗಸೂಚಿ ನೀಡಿದೆ.
5 ಕಿ.ಮೀ ವ್ಯಾಪ್ತಿಯಲ್ಲಿ ಉಚಿತ ಡೆಲಿವರಿ
ನಿಯಮಾವಳಿಯ ಪ್ರಕಾರ, ಗ್ಯಾಸ್ ಏಜೆನ್ಸಿಗಳು 5 ಕಿಲೋಮೀಟರ್ ವ್ಯಾಪ್ತಿಯೊಳಗಿನ ಮನೆಗಳಿಗೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಸಿಲಿಂಡರ್ ಪೂರೈಕೆ ಮಾಡಬೇಕು. 5 ಕಿ.ಮೀಗಿಂತ ಹೆಚ್ಚಿನ ದೂರದಲ್ಲಿ ಮಾತ್ರ ಹೆಚ್ಚುವರಿ ಶುಲ್ಕವನ್ನು ವಿಧಿಸಲು ಅವಕಾಶವಿದ್ದು, ಪ್ರತೀ ಸಿಲಿಂಡರ್ ಅಥವಾ ಟ್ರಿಪ್‌ಗೆ ಗರಿಷ್ಠ 1.60 ಪೈಸೆ ಮಾತ್ರ ವಿಧಿಸಬಹುದು.
ಹೆಚ್ಚುವರಿ ಹಣ ಕೇಳಿದರೆ ದೂರು ನೀಡಬಹುದು
ಡೆಲಿವರಿ ಸಿಬ್ಬಂದಿ ಮನಬಂದಂತೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಿದರೆ, ಗ್ರಾಹಕರು ತಕ್ಷಣವೇ ದೂರು ಸಲ್ಲಿಸಬಹುದು. ಇದಕ್ಕಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಪರ್ಕಿಸಬಹುದು.
- ದೂರವಾಣಿ ಸಂಖ್ಯೆ: 08172-268229
- ಸ್ಥಳೀಯ ತಹಶೀಲ್ದಾರ್ ಕಚೇರಿ: ಆಹಾರ ಶಾಖೆಯಲ್ಲಿ ನೇರವಾಗಿ ದೂರು ಸಲ್ಲಿಸಲು ಅವಕಾಶವಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟ ನಿಷೇಧ
ಗೃಹ ಬಳಕೆಯ ಸಿಲಿಂಡರ್‌ಗಳನ್ನು ಕಡ್ಡಾಯವಾಗಿ ನೇರವಾಗಿ ಗ್ರಾಹಕರ ಮನೆಗೆ ಮಾತ್ರ ಪೂರೈಕೆ ಮಾಡಬೇಕು. ರಸ್ತೆಬದಿ, ಮೈದಾನ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಸಿಲಿಂಡರ್ ಮಾರಾಟ ನಡೆಸುವಂತಿಲ್ಲವೆಂಬ ನಿಯಮವೂ ಜಾರಿಗೆ ಬಂದಿದೆ.
ಈ ಮೂಲಕ, ಎಲ್‌ಪಿಜಿ ಗ್ರಾಹಕರು ಬಿಲ್‌ನಲ್ಲಿ ಸೂಚಿಸಲಾದ ಮೊತ್ತವನ್ನಷ್ಟೇ ಪಾವತಿಸಿ, ನಿರಾಳವಾಗಿ ಮನೆ ಬಾಗಿಲಿಗೆ ಸಿಲಿಂಡರ್ ಪಡೆಯಬಹುದು.





